ಚುಟು ವಂಶ -
ಕರ್ನಾಟಕದಲ್ಲಿ ಆಳಿದ ಒಂದು ಪ್ರಾಚೀನ ಮನೆತನ ಶಾತವಾಹನರ ಮಾಂಡಲಿಕರಾಗಿ ಕ್ರಿ.ಶ. 2ನೆಯ ಶತಮಾನದಲ್ಲಿ ಕರ್ನಾಟಕದ ಬಹು ಭಾಗವನ್ನು ಮುಖ್ಯವಾಗಿ ಕುಂತಲವನ್ನು, ಈ ಮನೆತನದವರು ಆಳಿದಂತೆ ತೋರುತ್ತದೆ. ಅವರ ರಾಜಧಾನಿ ವೈಜಯಂತೀಪುರ ಅಥವಾ ಬನವಾಸಿ. ಚಿತ್ರದುರ್ಗದ ಬಳಿಯಲ್ಲಿದ್ದ ಚಂದ್ರವಳ್ಳಿಯೂ ಇವರ ಒಂದು ಪ್ರಾಂತೀಯ ರಾಜಧಾನಿಯಾಗಿದ್ದಿರಬೇಕೆಂದು ಅಲ್ಲಿ ದೊರೆತಿರುವ ಇವರ ಹಲವಾರು ನಾಣ್ಯಗಳಿಂದ ತಿಳಿಯಬಹುದು. ಇವರಿಗೆ ಶಾತಕರ್ಣಿಗಳೆಂಬ ಹೆಸರೂ ಉಂಟು. ಇವರಲ್ಲಿ ಪ್ರಮುಖನಾದವನು ವಿಣ್ಹುಕಡ್ಡ ಚುಟುಕುಲಾನಂದ ಶಾತಕರ್ಣಿ, ಈತನ ಶಾಸನಗಳು ಶಿಕಾರಿಪುರ ತಾಲ್ಲೂಕಿನ ಮಳವಳ್ಳಿಯಲ್ಲೂ ಬನವಾಸಿಯಲ್ಲೂ ದೊರೆತಿವೆ. ಈ ವಂಶದವರು ಹಾರಿತೀ ಪುತ್ರರೆಂದು ಮಾನವ್ಯಸಗೋತ್ರಕ್ಕೆ ಸೇರಿದವರೆಂದೂ ಈತನ ಶಾಸನಗಳಿಂದ ತಿಳಿದುಬರುತ್ತದೆ. ಮಳವಳ್ಳಿಯ ಶಾಸನ ಇವನ ಆಳ್ವಿಕೆಯ 2ನೆ ವರ್ಷಕ್ಕೆ ಸೇರಿದ್ದು. ಸಹಲಾಟವಿ ಎಂಬ ಗ್ರಾಮವನ್ನು ತಕಿಮಚಿಯ ಮಗ ಕೊಂಡಮಾಣನೆಂಬ ಬ್ರಾಹ್ಮಣನಿಗೆ ಮಟ್ಟಪಟ್ಟಿದೇವರಿಗಾಗಿ ಬ್ರಹ್ಮದೇಯವಾಗಿ ಬಿಡುವಂತೆ ರಜ್ಜುಕಮಹಾವಲ್ಲಭನಿಗೆ ಅಪ್ಪಣೆ ಮಾಡಿದುದಾಗಿ ಶಾಸನ ತಿಳಿಸುತ್ತದೆ. ವಿಣ್ಹುಕಡ್ಡ ಚುಟುಕುಲಾನಂದನ ಮಗಳು ಮಹಾಬೋಜಿ ಸಿವಖಡ ನಾಗಸಿರಿ ಎಂಬುವಳು ಬನವಾಸಿಯಲ್ಲಿ ನಾಗರಕಲ್ಲೊಂದನ್ನು ನಿಲ್ಲಿಸಿ ಕೆರೆಯನ್ನೂ ವಿಹಾರವನ್ನೂ ಕಟ್ಟಿಸಿದ್ದಾಳೆ. ನಾಗರಕಲ್ಲು ಆ ಕಾಲದ ಶಿಲ್ಪಶೈಲಿಗೆ ಮಾದರಿಯಾಗಿ ಈಗಲೂ ನಿಂತಿದೆ. ಶಾತಕರ್ಣಿಗಳು ತಾಳಗುಂದದ ಪ್ರಣವೇಶ್ವರ ದೇವರನ್ನು ಪೂಜಿಸುತ್ತಿದ್ದರೆಂದು ಅಲ್ಲಿಯ ಕದಂಬ ಶಾಂತಿವರ್ಮನ ಶಾಸನ ತಿಳಿಸುತ್ತದೆ.

ಚಂದ್ರವಳ್ಳಿಯಲ್ಲಿ ನಡೆಸಿದ ಉತ್ಖನನಗಳಲ್ಲಿ ಚುಟು ವಂಶದವರ ಹಲವಾರು ನಾಣ್ಯಗಳು ದೊರೆತಿವೆ. ಇವು ಸೀಸ ಮತ್ತು ಮಿಶ್ರಲೋಹದವು. ಇವುಗಳಲ್ಲಿ ಚುಟು ವಂಶದ ಚುಟುಕುಲಾನಂದ ಮತ್ತು ಮುಡಾನಂದರ ನಾಣ್ಯಗಳು ಹಲವು ಉಂಟು. ಅವುಗಳ ಮುಂಬದಿಯಲ್ಲಿ ಮೂರು ಅಂತಸ್ತುಗಳಾಗಿ ತೋರಿಸಿರುವ ಗುಡ್ಡವೂ ಅದರ ಸುತ್ತುಲೂ ರಾಜ್ಞೋ ಚುಟುಕಲಾನಂದಸ ಎಂದೋ ರಾಜ್ಞೋಮುಡಾನಂದಸ ಎಂದೋ ಬ್ರಾಹ್ಮೀ ಲಿಪಿಯ ಅಂಕುನನವೂ ಇವೆ. ಹಿಂಬದಿಯಲ್ಲಿ ಕಟಾಂಜದೊಳಗಿನ ವೃಕ್ಷದ ಚಿಹ್ನೆ ಮತ್ತು ನಂದಿಪಾದಗಳ ಜೊತೆಗೆ ಸ್ವಸ್ತಿಕ, ನಾಗ ಮತ್ತು ತ್ರಿಕೋಣಾಕೃತಿಗಳು ಇವೆ. ರಾಜನ ಹೆಸರಿಲ್ಲದೆ ಬರಿಯ ಚಿಹ್ನೆಗಳಿಂದಲೇ ಕೂಡಿದ ಹಲವು ಸಣ್ಣ ನಾಣ್ಯಗಳೂ ಇವುಗಳೊಂದಿಗೆ ದೊರೆತಿವೆ. ಅವೂ ಈ ವಂಶದ ರಾಜರಿಗೇ ಸೇರಿದುವೆಂಬುದು ಸ್ಪಷ್ಟ. ಈ ನಾಣ್ಯಗಳ ಜೊತೆಯಲ್ಲಿ ರೋಮನ್ ನಾಣ್ಯಗಳೂ ಮೆಡಿಟರೇನಿಯನ್ ಮೃಣ್ಪಾತ್ರೆಗಳೂ ದೊರೆತಿವೆಯಾದ್ದರಿಂದ ಇವರ ಕಾಲದಲ್ಲಿ ಹೊರದೇಶಗಳೊಡನೆ ವ್ಯಾಪಾರ ನಡೆಯುತ್ತಿತ್ತೆಂದು ಹೇಳಬಹುದು. ಅಲ್ಲಿ ದೊರೆತಿರುವ ಅನೇಕ ಬಗೆಯ ವಸ್ತುಗಳು ಆಗಿನ ಸಂಸ್ಕøತಿಯನ್ನು ಸೂಚಿಸುತ್ತವೆ. ಮೂರನೆಯ ಶತಮಾನದ ಮಧ್ಯ ಭಾಗದವರೆಗೂ-ಎಂದರೆ ಕದಂಬರ ಆಳ್ವಿಕೆ ಆರಂಭವಾಗುವವರೆಗೂ-ಈ ವಂಶದವರ ಆಡಳಿತ ಮಂದುವರಿದಿರಬೇಕು.					(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ